ಸಿಎಂ ಬೊಮ್ಮಾಯಿಗೆ ಪ್ರಾಣ ಬೆದರಿಕೆ; ಹಿಂದೂ ಮಹಾಸಭಾದ ಅಧ್ಯಕ್ಷ ಸೇರಿ ಮೂವರ ಬಂಧನ

ಮಂಗಳೂರು: ಮುಖ್ಯಮಂತ್ರಿ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸೇರಿದಂತೆ ಪೋರ್ಜರಿ ದಾಖಲೆ ಸೃಷ್ಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಅಧ್ಯಕ್ಷ ಧರ್ಮೇಂದ್ರ, ರಾಜೇಶ್‌ ಪವಿತ್ರನ್‌ ಮತ್ತು ಪ್ರೇಮ್‌ ಪೊಳಲಿ ಬಂಧಿತ ಆರೋಪಿಗಳು. ಎರಡು ದಿನದ ಹಿಂದೆ ಅರೋಪಿ ಹಿಂದೂ ಮಹಾಸಭಾ ಅಧ್ಯಕ್ಷ ಧರ್ಮೇಂದ್ರ ಪತ್ರಿಕಾ ಗೋಷ್ಠಿ ನಡೆಸಿ ಮಹಾತ್ಮ ಗಾಂಧಿಯನ್ನೇ ಬಿಡದ ನಾವು ನಿಮ್ಮ ವಿಚಾರದಲ್ಲಿ ಆಲೋಚನೆ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದ. ಇದರ ಬೆನ್ನಲ್ಲೇ ಆರೋಪಿಯ ವಿರುದ್ಧ ಮಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ವಿವರ: ಹಿಂದೂ ಮಹಾಸಭಾ ಅಧ್ಯಕ್ಷ ಧರ್ಮೇಂದ್ರ ಶನಿವಾರ ಪತ್ರಿಕಾ ಗೋಷ್ಠಿ ನಡೆಸಿ ಗಾಂಧೀಜಿಯನ್ನೂ ಬಿಡಲಿಲ್ಲ ನಾವು. ಇನ್ನು ನೀವು ಯಾವ ಲೆಕ್ಕ? ಹಿಂದೂಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಗಾಂಧೀಜಿಯನ್ನು ಹತ್ಯೆ ಮಾಡಲಾಗಿದೆ ಅಂದರೆ ನಿಮ್ಮ ವಿಚಾರದಲ್ಲಿ ನಾವು ಆಲೋಚನೆ ಮಾಡಲು ಸಾಧ್ಯವಿಲ್ಲ ಅಂತಿರಾ' ಎಂದು ಹೇಳಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೇ ಕೊಲೆ ಬೆದರಿಕೆ ಹಾಕಿದ್ದಾರೆಂದು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಡಾ. ಲೋಹಿತ್‌ ಕುಮಾರ್‌ ಬರ್ಕೆ ಠಾಣೆಗೆ ದೂರು ನೀಡಿದ್ದರು.

ಮಾತ್ರವಲ್ಲದೆ ಹಿಂದೂ ಮಹಾಸಭಾದಿಂದ ಉಚ್ಚಾಟಿತರಾದ ಕುಳಾಯಿಯ ರಾಜೇಶ್‌ ಪವಿತ್ರನ್‌, ಉರ್ವದ ಧರ್ಮೇಂದ್ರ, ಪ್ರೇಮ್‌ ಪೊಳಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಂದೀಪ್‌ ಶೆಟ್ಟಿ ಅಡ್ಕ ಹಿಂದೂ ಮಹಾಸಭಾದ ಹೆಸರು ದುರ್ಬಳಕೆ ಮಾಡುತ್ತಿರುವ ಬಗ್ಗೆ ಹಾಗೂ ಕಮಿಟಿಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಿಂದು ಮಹಾಸಭಾದ ಅಧ್ಯಕ್ಷನೆಂದು ಗುರುತಿಸಿಕೊಂಡಿದ್ದ ರಾಜೇಶ್‌ ಪವಿತ್ರನ್‌ ಪತ್ರಿಕಾ ಗೋಷ್ಠಿಯಲ್ಲಿ ಧರ್ಮೇಂದ್ರ ನೀಡಿದ ಹೇಳಿಕೆಯನ್ನು ಸಮರ್ಥಿಸಿದ್ದ. ಈ ಎಲ್ಲ ಆಧಾರದಲ್ಲಿ ಧರ್ಮೇಂದ್ರ, ರಾಜೇಶ್‌, ಪ್ರೇಮ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಎರಡು ಗುಂಪುಗಳ ಮಧ್ಯೆ ವೈಷಮ್ಯ, ಸಾಮಾಜಿಕ ಶಾಂತಿ ಕದಡುವ ಹೇಳಿಕೆ, ಪ್ರಾಣ ಬೆದರಿಕೆ, ಪೋರ್ಜರಿ ದಾಖಲೆ ಸೇರಿದಂತೆ ನಾನಾ ಪ್ರಕರಣ ದಾಖಲಾಗಿದೆ. ಅಲ್ಲದೇ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಪ್ರಾಣ ಬೆದರಿಕೆ ಒಡ್ಡಿದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.