ಬೆಂಗೂರಿನಲ್ಲಿ ಐವರ ಆತ್ಮಹತ್ಯೆ ಪ್ರಕರಣ : 3 ಡೆತ್‌ನೋಟ್‌ನಲ್ಲೂ ತಂದೆ ವಿರುದ್ಧ ಆರೋಪ

ಬೆಂಗಳೂರು: ನಗರದಲ್ಲಿ ನಡೆದಿದ್ದ ಒಂದೇ ಮನೆಯಲ್ಲಿ ಐವರ ಆತ್ಮಹತ್ಯೆ ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸುಮಾರು ಐದು ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿ, ಡೆತ್‌ ನೋಟ್‌ ಸೇರಿದಂತೆ ಹಲವು ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬ್ಯಾಡರಹಳ್ಳಿಯ ತಿಗಳರಪಾಳ್ಯದಲ್ಲಿ ಪತ್ರಕರ್ತ ಹಲ್ಲೆಗೆರೆ ಮನೆಯಲ್ಲಿ ಎಸಿಪಿ ನಂಜುಂಡೇಗೌಡ ಹಾಗೂ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ರಾಜೀವ್‌ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಭಾನುವಾರ ಸ್ಥಳ ಮಹಜರು ನಡೆಸಿದ್ದಾರೆ. ಈ ವೇಳೆ ಅವರ ಮಕ್ಕಳಾದ ಸಿಂಚನಾ, ಸಿಂಧುರಾಣಿ, ಮಧುಸಾಗರ್‌ ಬರೆದಿರುವ ಪ್ರತ್ಯೇಕ 3 ಡೆತ್‌ನೋಟ್‌ಗಳು ಪತ್ತೆಯಾಗಿವೆ.

ಇದರಲ್ಲಿ ಮೂವರು ಮಕ್ಕಳೂ ತಂದೆ ಶಂಕರ್‌ ವಿರುದ್ಧವೇ ಆರೋಪ ಮಾಡಿದ್ದು, ತಂದೆಯ ಅನೈತಿಕ ಸಂಬಂಧ, ದೌರ್ಜನ್ಯ ನಡೆಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಶಂಕರ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಕಂತೆ ಕಂತೆ ಹಣ, ಚಿನ್ನ ಪತ್ತೆ:
ಮಹಜರು ನಡೆಸಿದ ಪೊಲೀಸರಿಗೆ ಶಂಕರ್‌ ಅವರ ಐಷಾರಾಮಿ ಮನೆಯಲ್ಲಿ 11 ಲಕ್ಷ ರೂ. ಹಾಗೂ ಒಂದು ಕೆ.ಜಿ. ಚಿನ್ನಾಭರಣ ಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆಯೂ ಪೊಲೀಸರು ಶಂಕರ್‌ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ ?'ಎಂಡ್‌ ಆಫ್‌ ದ ಅಬ್ಯೂಸ್‌ ಆಫ್‌ ವಿಮೆನ್‌ ಆ್ಯಂಡ್‌ ಚೈಲ್ಡ್‌' (ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯದ ಕೊನೆ ) ಎಂದು ಮೂರು ಡೆತ್‌ನೋಟ್‌ನಲ್ಲೂ ಒಂದೇ ಹೆಡ್ಡಿಂಗ್‌ ಬರೆಯಲಾಗಿದೆ. ಪ್ರತಿ ಡೆತ್‌ನೋಟ್‌ ಸಹ 3-4 ಪುಟಗಳಿದ್ದು, ಇದರಲ್ಲಿ ಶಂಕರ್‌ ವಿರುದ್ಧದ ಕೆಲ ವೈಯಕ್ತಿಕ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

''ಅಪ್ಪನಿಗೆ ಅನೈತಿಕ ಸಂಬಂಧ ಇತ್ತು. ಇದರಿಂದ ಸಂಸಾರದಲ್ಲಿ ಗಲಾಟೆಗಳು ನಡೆದಿವೆ. ಅಪ್ಪ ಮತ್ತು ಪತಿಯಂದಿರು ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆವು. ಗಂಡನ ಮನೆಯಲ್ಲೂ ನೆಮ್ಮದಿ ಇರಲಿಲ್ಲ. ತವರು ಮನೆಯಲ್ಲೂ ಸುಖ ಸಿಗಲಿಲ್ಲ, ಇನ್ಯಾವ ಖುಷಿಗೆ ಬದುಕಬೇಕು. ಹೀಗಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದೇವೆ'' ಎಂಬುದು ಸಿಂಚನಾ, ಸಿಂಧುರಾಣಿ ಡೆತ್‌ ನೋಟ್‌ನಲ್ಲಿ ಉಲ್ಲೇಖವಾಗಿದೆ.

ಇಬ್ಬರು ಹೆಣ್ಣುಮಕ್ಕಳೂ ಪತಿಯರ ಬಗ್ಗೆ ಆರೋಪ ಮಾಡಿದ್ದಾರೆ. ಸಿಂಚನಾ ಗಂಡನ ಮನೆಯವರ ಕಿರುಕುಳದ ಬಗ್ಗೆ ಇಂಚಿಂಚಾಗಿ ಬರೆದಿದ್ದಾರೆ. ಮದುವೆಯಾದ ಹೊಸದರಲ್ಲಿಎರಡು ಬಾರಿ ಅಬಾರ್ಷನ್‌ ಆಗಿದ್ದರೂ ಪತಿ ಮನೆಯವರು ನಿರ್ಲಕ್ಷ್ಯ ವಹಿಸಿದ್ದರು. ಅಪ್ಪನ ಬಳಿ ಹೇಳಿಕೊಂಡರೂ ಗಂಡನ ಮನೆಯವರಿಗೆ ಸಪೋರ್ಟ್‌ ಮಾಡಿ ಮಾತನಾಡುತ್ತಿದ್ದರು. ಮಧುಸಾಗರ್‌ ಬರೆದಿರುವ ಟೆತ್‌ನೋಟ್‌ನಲ್ಲಿ ತಂದೆ ಶಂಕರ್‌ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದೆ. ಲ್ಯಾಪ್‌ಟಾಪ್‌ನಲ್ಲಿ ಎಲ್ಲವೂ ಇದೆ ಎಂದು ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ಡೆತ್‌ನೋಟ್‌ನಲ್ಲಿರುವ ಹ್ಯಾಂಡ್‌ ರೈಟಿಂಗ್‌ ಮೃತರದ್ದೇ ಎಂದು ಎಫ್‌ಎಸ್‌ಎಲ್‌ನಿಂದ ದೃಢೀಕರಿಸಿಕೊಳ್ಳಲಾಗುತ್ತದೆ. ಇದಾದ ಬಳಿಕ ಶಂಕರ್‌, ಅಳಿಯಂದಿರಾದ ಪ್ರವೀಣ್‌ ಹಾಗೂ ಶ್ರೀಕಾಂತ್‌ ವಿರುದ್ಧ ಕೇಸ್‌ ದಾಖಲಾಗುವ ಸಾಧ್ಯತೆಗಳಿವೆ.

ಲ್ಯಾಪ್‌ಟಾಪ್‌ ಜಪ್ತಿ!
ಸಾವಿನ ಸಂಬಂಧ ಇನ್ನೂ ಕೆಲ ಸಾಕ್ಷ್ಯಗಳು ಲ್ಯಾಪ್‌ಟಾಪ್‌ನಲ್ಲಿರುವ ಶಂಕೆ ವ್ಯಕ್ತವಾದ ಕಾರಣ ಮನೆಯಲ್ಲಿದ್ದ 3 ಲ್ಯಾಪ್‌ಟಾಪ್‌, 5 ಮೊಬೈಲ್‌, 1 ಪೆನ್‌ಡ್ರೈವ್‌ ಜಪ್ತಿ ಮಾಡಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಕಳುಹಿಸಲಾಗಿದೆ. ಮನೆಯ ರೂಮ...ಗಳಲ್ಲಿ ಅಲ್ಲಲ್ಲಿ ನೋಟುಗಳು ಹರಿದು ಬಿದ್ದಿರುವುದು ಕಂಡು ಬಂದಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, 9 ತಿಂಗಳ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿಂಧುರಾಣಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕೆಲ ಸಾಕ್ಷ್ಯ ಲಭ್ಯವಾಗಿದೆ.

ಶಂಕರ್‌ ಸುತ್ತ ಅನುಮಾನ!ಶಂಕರ್‌ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಳ್ಳುವ 20 ದಿನಗಳ ಮುನ್ನ ಸಿಂಧುರಾಣಿ ಮಗುವಿನ ನಾಮಕರಣ ವಿಷಯಾಗಿ ಮನೆಯಲ್ಲಿ ಪತ್ನಿ, ಮಕ್ಕಳ ಜತೆ ತನಗೆ ಜಗಳವಾಗಿತ್ತು. ಈ ವೇಳೆ ಸಿಂಧುರಾಣಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್‌ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಗಳನ್ನು ಬದುಕಿಸಿಕೊಳ್ಳಲಾಗಿತ್ತು ಎಂದು ಶಂಕರ್‌ ತಿಳಿಸಿದ್ದರು.

ಇದಾದ ಬಳಿಕ ಭಾನುವಾರ (ಸೆ.12) ಮತ್ತೆ ಶಂಕರ್‌ ಕುಟುಂಬಸ್ಥರ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿರುವುದಾಗಿ ಅವರೇ ತಿಳಿಸಿದ್ದಾರೆ. ಒಂದೆರಡು ದಿನಗಳ ನಂತರ ತನ್ನ ಕುಟುಂಬಸ್ಥರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಸಂದೇಶಕ್ಕೂ ಉತ್ತರ ಬರಲಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೇ ತಮ್ಮ ಪುತ್ರಿ ಆತ್ಮಹತ್ಯೆಗೆ ಯತ್ನ ಮಾಡಿದ್ದ ವಿಷಯ ಅರಿತಿದ್ದರೂ ಕುಟುಂಬಸ್ಥರು ಸಂಪರ್ಕಕ್ಕೆ ಸಿಗದಿದ್ದಾಗ ಆತಂಕಗೊಂಡು ಮನೆಗೆ ಭೇಟಿ ನೀಡದಿರುವುದು ಶಂಕರ್‌ ಅವರ ಮೇಲೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.