3ನೇ ಹಂತದಲ್ಲಿ ಮತದಾನ ಭರಾಟೆ, ಅಸ್ಸಾಂನಲ್ಲಿ ದಾಖಲೆ ವೋಟಿಂಗ್

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಅಲ್ಪ ಹಿಂಸಾಚಾರದ ಹೊರತಾಗಿ ದೇಶದ 15 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 117 ಕ್ಷೇತ್ರಗಳಿಗಾಗಿ ಮಂಗಳವಾರ ನಡೆದ ಮೂರನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು. ಪ್ರಾಥಮಿಕ ವರದಿಗಳ ಪ್ರಕಾರ, ಶೇ.62.87ರಷ್ಟು ಮತದಾನವಾಗಿದೆ.
ಈ ಹಿಂದಿನ ಎರಡು ಹಂತಗಳಲ್ಲಿ ಆಗಿದ್ದಂತೆ ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಶೇ. 79ರಷ್ಟು ವೋಟಿಂಗ್‌ ನಡೆದಿದೆ. ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಕ್ಷೇತ್ರದಲ್ಲಿ ಅತ್ಯಂತ ಕನಿಷ್ಠ ಅಂದರೆ ಶೇ.12.46ರಷ್ಟು ಮತದಾನವಾಗಿದೆ. ಮತದಾರರು ಒಟ್ಟು 1,640 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಿದ್ದಾರೆ.

ಹಿಂದೂವೊಬ್ಬ ಭಯೋತ್ಪಾದಕನಾಗಲು ಸಾಧ್ಯವಿಲ್ಲ: ಅಮಿತ್ ಶಾ

ಭೋಪಾಲ್: ಮಾಲೆಗಾಂವ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಅವರನ್ನು ಭೋಪಾಲ್‌ನಿಂದ ಕಣಕ್ಕಿಳಿಸಿರುವುದನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿಂದೂವೊಬ್ಬ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಮಧ್ಯಪ್ರದೇಶದ ಛತ್ರಪುರದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ. ಸನಾತನ ಸಂಸ್ಕೃತಿ ಎಂದಿಗೂ, ಯಾರಿಗೂ ಹಾನಿ ಮಾಡಿಲ್ಲ. ಆದರೆ ಕಾಂಗ್ರೆಸ್ ಇದಕ್ಕೆ ಉಗ್ರವಾದ ಹಣೆಪಟ್ಟಿ ಕಟ್ಟಿದೆ. ಸಾಧ್ವಿ ಭೋಪಾಲ್ದಿಂದ ಕಣಕ್ಕಿಳಿಯುತ್ತಿರುವುದು ಕಾಂಗ್ರೆಸ್‌ನ ಈ ಆರೋಪದ ವಿರುದ್ಧ ನಡೆಸುತ್ತಿರುವ ಸತ್ಯಾಗ್ರಹ ಎಂದಿದ್ದಾರೆ.

ದಿಗ್ವಿಜಯ್ ಸಿಂಗ್ ಸಭೆಯಲ್ಲಿ ಮೋದಿ ಗುಣಗಾನ: ಯುವಕನಿಗೆ ಸನ್ಮಾನ

ಹೊಸದಿಲ್ಲಿ: ದಿಗ್ವಿಜಯ್ ಸಿಂಗ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಗುಣಗಾನ ಮಾಡಿದ ಯುವಕನಿಗೆ ಬಿಜೆಪಿ ಸನ್ಮಾನ ಮಾಡಿದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬಿಜೆಪಿ ಸರಕಾರ 15ಲಕ್ಷ ರೂಪಾಯಿ ಹಾಕಿದೆಯಾ ಎಂದು ಕೇಳಿದ್ದಕ್ಕೆ ಯುವಕ ವೇದಿಕೆಯ ಮೇಲೆ ಬಂದು ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನು ಸದೆ ಬಡಿದಿದ್ದಾರೆ ಎಂದುತ್ತರಿಸಿದ್ದ.

ರಾಜ್‌ ಜನುಮ ದಿನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ, ರಕ್ತದಾನ, ನೇತ್ರದಾನ ಶಿಬಿರ

ಇಂದು (ಏ.24) ಡಾ.ರಾಜ್‌ ಕುಮಾರ್‌ ಜನುಮದಿನ. ನಾಡಿನಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗೆಯೇ ರಾಜ್ಯ ಸರಕಾರ ಕೂಡ ವರನಟನ ಹುಟ್ಟು ಹಬ್ಬದ ಆಚರಣೆಗೆ ತಯಾರಿ ಮಾಡಿಕೊಂಡಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್‌ವುಡ್‌ ಗಣ್ಯರು ಮತ್ತು ರಾಜ್‌ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಮೇ 2ರ ಒಳಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ

ಬೆಂಗಳೂರು: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಂಗಳವಾರ ಪೂರ್ಣಗೊಂಡಿದ್ದು, ಏಪ್ರಿಲ್‌ 30 ರಿಂದ ಮೇ 2 ರ ಒಳಗೆ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.