2017ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟ

ಬೆಂಗಳೂರು,ಏ.25-ಮೇ 2 ಮತ್ತು 3ರಂದು 2017ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಮೇ 2ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ ಪರೀಕ್ಷೆ ನಡೆಯಲಿದೆ.  ಮೇ 3ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ಕನ್ನಡ ಭಾಷಾ ಪರೀಕ್ಷೆ ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ.

ಗೋರಕ್ಷಕರನ್ನು ನಿಯಂತ್ರಿಸದಿದ್ದರೆ ಹಿಂಸಾಚಾರ ಸಾಧ್ಯತೆ : 23 ನಿವೃತ್ತ ಐಎಎಸ್ ಅಧಿಕಾರಿಗಳ ಎಚ್ಚರಿಕೆ

ಜೈಪುರ, ಏ.25- ಮುಸ್ಲಿಂ ರೈತನೊಬ್ಬನನ್ನು ಹತ್ಯೆ ಮಾಡಿರುವ ಗೋರಕ್ಷಕನನ್ನು ಬಂಧಿಸುವಂತೆ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂದಿಯಾ ಅವರನ್ನು ಆಗ್ರಹಿಸಿರುವ 23 ಮಂದಿ ನಿವೃತ್ತ ಐಎಎಸ್/ಐಪಿಎಸ್ ಅಧಿಕಾರಿಗಳು, ಇವರನ್ನು ನಿಯಂತ್ರಿಸದಿದ್ದರೆ ಭಾರೀ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.   ಅಲ್ಮಾರ್‍ನಲ್ಲಿ ಏ.1ರಂದು ಹೈನುಗಾರಿಕೆ ನಡೆಸುತ್ತಿದ್ದ ಪೆಹ್ಲೂ ಖಾನ್ ಎಂಬ ರೈತನನ್ನು ಗೋರಕ್ಷಕರ ಗುಂಪೊಂದು  ಥಳಿಸಿ ಹತ್ಯೆ ಮಾಡಿದ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಇವರು, ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಪೊಲೀಸ್ ಮತ್ತು ಇತರ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ 1968ನೇ ಬ್ಯಾಚ್‍ನ ಐಎಎಸ್/ಐಪಿಎಸ್ ಅಧಿಕಾರಿಗಳಾಗಿದ್ದವರು ಆಗ್ರಹಿಸಿದ್ದಾರೆ.

ಶಿರಾ ಬಳಿ ಲಾರಿ-ಇನ್ನೋವಾ ಅಪಘಾತ : ವಾರಸುದಾರರಿಗೆ ಶವಗಳ ಹಸ್ತಾಂತರ

ತುಮಕೂರು,ಏ.25-ಮುಂಬೈಗೆ ತೆರಳುತ್ತಿದ್ದ ಇನೋವಾ ಕಾರಿಗೆ ಅತಿವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಇಂದು ಬೆಳಗ್ಗೆ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.   ನಿನ್ನೆ ಸಂಜೆ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು ಜಿಲ್ಲೆ ಶಿರಾ ಬಳಿಯ ಮಾಳಂಗಿ ಬಳಿ ಸೇಲಂನಿಂದ ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ಇನ್ನೋವಾ ಕಾರಿನಲ್ಲಿ ತಮಿಳುನಾಡು ಮೂಲದವರು ತೆರಳುತ್ತಿದ್ದರು. ಈ ವೇಳೆ ಎದುರಿಗೆ ಯಮನಂತೆ ಅತಿವೇಗವಾಗಿ ಬಂದ ಲಾರಿ ಈ ಕಾರಿಗೆ ಅಪ್ಪಳಿಸಿ ಉರುಳಿಬಿದ್ದಿದೆ.
ಪರಿಣಾಮವಾಗಿ ಕಾರಿನಲ್ಲಿದ್ದ ಮೊಹಮ್ಮದ್ ಸಾಧಿಕ್(52), ಜಾಫರ್(26) ಮತ್ತು ಸಿದ್ದಿಕ್(50) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು , ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಕೊಳವೆ ಬಾವಿ ದುರಂತ : ಕಾವೇರಿ ಕುಟುಂಬಕ್ಕೆ ಶಾಸಕ ಲಕ್ಷ್ಮಣ ಸವದಿಯವರಿಂದ ವೈಯಕ್ತಿಕ ನೆರವು

ಬೆಳಗಾವಿ, ಏ.25– ಬಾಲಕಿ ಕಾವೇರಿ ಸಾವಿನಿಂದ ಬಹಳ ದುಃಖವಾಗಿದ್ದು, ಆಕೆಯ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ ನೆರವು ನೀಡಲಿದ್ದೇನೆ. ಜತೆಗೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕೆಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಒತ್ತಾಯಿಸಿದ್ದಾರೆ. ಜಂಝರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಸತತ 54 ಗಂಟೆಗಳ ಕಾಲ ದೀರ್ಘ ಕಾರ್ಯಾಚರಣೆ ನಡೆಸಿದ್ದರೂ ಕಾವೇರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ದೇವರು ಬಾಲಕಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಮಾರುತಿ ಓಮ್ನಿ ಕಾರು

ಮೈಸೂರು, ಏ.25-ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ವಿಜಯನಗರದಲ್ಲಿ ನಡೆದಿದೆ. ಬೆಳಗ್ಗೆ 10.15ರ ಸುಮಾರಿಗೆ ವಿಜಯನಗರ 4ನೆ ಹಂತದಲ್ಲಿ ಮಾರುತಿ ಓಮ್ನಿ ಕಾರು ಹೋಗುತ್ತಿತ್ತು. ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಕಾರನ್ನು ರಸ್ತೆ ಬದಿ ನಿಲ್ಲಿಸಿ ಪರಾರಿಯಾಗಿದ್ದಾನೆ.