15 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ದಾಳಿಗೆ ಬಲಿ

ಮಂಡ್ಯ: ಆನೆ ದಾಳಿಗೆ ಕರ್ತವ್ಯ ನಿರತ ಅರಣ್ಯ ಇಲಾಖೆಯ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಸೋಲಬ ಗ್ರಾಮದಲ್ಲಿ ನಡೆದಿದೆ.
35 ವರ್ಷದ ಮಹದೇವು ಸಾವನ್ನಪ್ಪಿದ ಅರಣ್ಯ ಇಲಾಖೆಯ ಸಿಬ್ಬಂದಿ. ಮಹದೇವು ಅವರು ಕಳೆದ 15 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚ್‍ಮನ್ ಆಗಿ ಕೆಲಸ ಮಾಡಿಕೊಂಡಿದ್ದರು. ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಕಾಡಿನಿಂದ ಗ್ರಾಮದತ್ತ ಆನೆಗಳು ಬರುತ್ತಿದ್ದವು.
ವಿಷಯ ತಿಳಿದು ಗ್ರಾಮದತ್ತ ಬರುತ್ತಿದ್ದ ಆನೆಗಳನ್ನು ಕಾಡಿಗಟ್ಟಲು ಸ್ಥಳಕ್ಕೆ ನಾಲ್ವರು ಅರಣ್ಯ ಸಿಬ್ಬಂದಿ ತೆರಳಿದ್ದರು. ಕತ್ತಲೆಯಲ್ಲಿ ಮಹದೇವು ಆನೆಯ ಬಳಿಯೇ ಹೋಗಿದ್ದಾರೆ. ಈ ವೇಳೆ ಆನೆ ಸೊಂಡಿಲಿನಿಂದ ಬಡಿದು ಮಹದೇವು ಅವರನ್ನು ಸಾಯಿಸಿದೆ.

ಬಸ್ಸಿನಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದ ಯುವತಿ – ವೀಡಿಯೊ ವೈರಲ್

ಭುವನೇಶ್ವರ: ಯುವತಿಯೊಬ್ಬಳು ಬಸ್ಸಿನಲ್ಲಿ ಕಿರುಕುಳ ನೀಡಿದ ವ್ಯಕ್ತಿಗೆ ತನ್ನ ಚಪ್ಪಲಿ ತೆಗೆದು ಬಾರಿಸಿದ್ದು, ಈಗ ಆ ವೀಡಿಯೊ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ಈ ಘಟನೆ ಮಂಗಳವಾರ ನಡೆದಿದ್ದು, ನಗರದ ಬಸ್ ಒಂದರಲ್ಲಿ ಯುವತಿಯ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಯುವತಿ ಧೈರ್ಯದಿಂದ ಎದ್ದು ಆತನಿಗೆ ಬೈದಿದ್ದಾರೆ. ಆದರೆ ಆ ವ್ಯಕ್ತಿ ತಾನು ಮುಗ್ಧ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾನೆ. ನಂತರ ಆಕೆ ತನ್ನ ಚಪ್ಪಲಿ ತೆಗೆದು ಹೊಡೆದಿದ್ದಾರೆ. ಬಳಿಕ ಬಸ್ ನಲ್ಲಿ ಕೆಲವರು ಸಹ-ಪ್ರಯಾಣಿಕರು ಕ್ಷಮೆ ಕೇಳುವಂತೆ ವ್ಯಕ್ತಿಗೆ ಒತ್ತಾಯಪಡಿಸುವುದರ ಮೂಲಕ ಯುವತಿಯನ್ನ ಬೆಂಬಲಿಸಿದ್ದಾರೆ.

ಕಬಿನಿ ಹಿನ್ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ಸಾವು!

ಮೈಸೂರು: ಕಬಿನಿ ಹಿನ್ನೀರಿನಲ್ಲಿ ಮುಳುಗಿ ಮೂವರ ಸಾವನ್ನಪ್ಪಿದ ಘಟನೆ ಕೇರಳದ ಗಡಿಭಾಗ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಗೋಳೂರು ಮಸೀದಿಯ ಬಳಿ ನಡೆದಿದೆ.
ತಂದೆ ಚಾಲಕಲ್ ಬೇಬಿ(53), ಮಗ ಅಜಿತ್(24) ಹಾಗೂ ಮಗಳು ಅನಿತ(18) ಮೃತ ದುರ್ದೈವಿಗಳು. ಮೃತರು ಕೇರಳದ ಕಬಿನಿ ಗಿರಿ ನಿವಾಸಿಗಳು ಎಂದು ಹೇಳಲಾಗಿದ್ದು, ಮಗಳು ಅನಿತಾ ಸ್ನಾನ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.

ಮಗಳು ಅನಿತಾಳನ್ನು ರಕ್ಷಿಸಲು ಆಕೆಯ ತಂದೆ ನದಿಯ ಬಳಿ ಹೋದರು. ನಂತರ ಅವರು ಮುಳುಗುತ್ತಿದ್ದಾಗ ತಂದೆಗೆ ಸಹಾಯ ಮಾಡಲು ಹೋದ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೇರಳದ ಪುಲ್ಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಕೃಷಿ ಹೊಂಡಕ್ಕೆ ಹಾರಿ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ಕೋಲಾರ: ಕೌಟುಂಬಿಕ ಕಲಹ ಹಿನ್ನೆಲೆ ಕೃಷಿ ಹೊಂಡಕ್ಕೆ ಹಾರಿ ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಗೊಟ್ಟಕುಂಟೆ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೊಟ್ಟಗಿಂಟೆ ಗ್ರಾಮದ ತಾಯಿ ಕನಕ(26), ಅಮೃತ(6) ಹಾಗೂ ಜಯಂತಿ(3) ಮೃತರು.

ರಾತ್ರಿ ಗಂಡ ನರಸಿಂಹ ರೆಡ್ಡಿಯೊಂದಿಗೆ ಜಗಳ ಮಾಡಿಕೊಂಡಿರುವ ಕನಕ ತನ್ನಿಬ್ಬರ ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿ ತರುವಾಯ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.